ಅನಾದಿ ಕಾಲದಿಂದಲೂ ಮನುಷ್ಯನ ತಿರುಗಾಟ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಗಳಿಗೆ ದಿಕ್ಕುಗಳು ಅವಿಭಾಜ್ಯ ಅಂಗವಾಗಿವೆ.
ಇಂದು ಆಧುನಿಕ ಯುಗದಲ್ಲಿ ಇತ್ತೀಚೆಗೆ ನಾವು ರಾಕೆಟ್, ಉಪಗ್ರಹ ಎಲ್ಲ ಬಳಸಿ ಉತ್ತರ ದಿಕ್ಕಿಗೆ ಭೂಮಿಯ ಉತ್ತರ ಧ್ರುವ, ದಕ್ಷಿಣ ದಿಕ್ಕಿಗೆ ದಕ್ಷಿಣ ಧ್ರುವ ಎಂಬುದೆಲ್ಲ ತಿಳಿದಿದ್ದೇವೆ.
ಆದರೆ ಹಿಂದೆ ಅದೆಲ್ಲ ಮನುಷ್ಯನಿಗೆ ಗೊತ್ತಿರಲಿಲ್ಲ. ಭೂಮಿಯ ಮೇಲಿಂದ ಕಣ್ಣಿಗೆ ಕಾಣುತ್ತಿದ್ದುದು ಸೂರ್ಯ, ಚಂದ್ರ, ನಕ್ಷತ್ರಗಳು ಮಾತ್ರ! ಕೆಲವರು ಭೂಮಿ ಚಪ್ಪಟೆ ಇದೆಯೆಂದು ಅದರ ತೀರಾ ಅಂಚಿನ ಹೊರಗೆ ಹೋದರೆ ಅಂತರಿಕ್ಷಕ್ಕೆ ಟೊಂಯ್... ಎಂದು ಬಿದ್ದು ಹೋಗುತ್ತೇವೆ ಕೂಡಾ ಎಂದು ನಂಬಿದ್ದರು!
ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ.
ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು. ಅವೆರಡರ ನಡುವಿನ ದಿಕ್ಕುಗಳಿಗೆ ಇನ್ನೆರಡು ಹೆಸರು.
ಗುಡ್ಡ ಕಾಡುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಟ ಮಾಡುವಾಗ ಜಾಗದ ಗುರುತು, ಸೂರ್ಯನ ಸ್ಥಾನ ಇತ್ಯಾದಿ ಆಧಾರದ ಮೇಲೆ ಹೋಗುತ್ತಾ ಇದ್ದ.
ದಿಕ್ಕುಗಳು ಯಾವುವು?
ಸೂರ್ಯ ಮೂಡಿ ಬಂದ ಅಂದರೆ ಉದಯ ಆಗುವ ದಿಕ್ಕು ಪೂರ್ವ ಅರ್ಥಾತ್ ಮೂಡಣ (ಮೂಡಲ) ಎಂದು ಕರೆದ. ಸೂರ್ಯ ಮುಳುಗುವ ದಿಕ್ಕನ್ನು ಪಶ್ಚಿಮ / ಪಡುವಣ (ಪಡುವಲ) ಎಂದು ಗುರುತಿಸಿದ.
ಉಳಿದ ಎರಡು ಲಂಬವಾಗಿರುವ ದಿಕ್ಕುಗಳು ಉತ್ತರ (ಬಡಗಣ) ಹಾಗೂ ದಕ್ಷಿಣ (ತೆಂಕಣ) ಎಂದು ಕರೆಯಲ್ಪಟ್ಟಿತು.
- ಉತ್ತರ (ಬಡಗಣ / ಬಡಗಲು)
- ದಕ್ಷಿಣ (ತೆಂಕಣ / ತೆಂಕು)
- ಪೂರ್ವ (ಮೂಡಣ / ಮೂಡಲು)
- ಪಶ್ಚಿಮ (ಪಡುವಣ / ಪಡುವಲು)
ವಾಸ್ತವಿಕವಾಗಿ ದಿಕ್ಕುಗಳು ಭೂಮಿಯ ಹಾಗೂ ಅದರ ಚಲನೆಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ನಾವು ಭೂಮಿಯ ಮೇಲೆ ಎಲ್ಲೇ ನಿಂತರೂ ಉತ್ತರ ದಿಕ್ಕು ಎಂದರೆ ಭೂಮಿಯ ಉತ್ತರ ಧ್ರುವದ ಕಡೆಗೆ ಹಾಗೇ ದಕ್ಷಿಣ ದಿಕ್ಕು ಭೂಮಿಯ ದಕ್ಷಿಣ ಧ್ರುವದ ಕಡೆಗೆ ಎಂದರ್ಥ.
ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ವನ್ನು ತೋರಿಸುತ್ತದೆ.
ಈ ಮೇಲಿನ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕು ಗಳೆಂದು ಕರೆಯುತ್ತಾರೆ. ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಇವು ಅಂತರ್ ದಿಕ್ಕು ಗಳಾಗಿವೆ.
ಕಂಪಾಸ್ ಸಾಧನ
ದಿಕ್ಕುಗಳನ್ನು ಕಂಡು ಹಿಡಿಯುವ ಸಾಧನವನ್ನು ಕಂಪಾಸ್ ಎಂದು ಕರೆಯುತ್ತಾರೆ.
ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ಅಥವಾ ಚುಂಬಕದಂತೆ ವರ್ತಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್ ಮೇಲಿನ ದಿಕ್ಕುಗಳ ಗುರುತನ್ನ ಕೆಳಗಿನ ಚಿತ್ರದಲ್ಲಿ ಕಾಣ ಬಹುದು.
ಕಂಪಾಸ್ ಸಾಧನ ಕಂಡು ಹಿಡಿಯುವ ಮುನ್ನ ಸೂರ್ಯ ನ ಸ್ಥಾನ, ನಕ್ಷತ್ರಗಳು, ಹಕ್ಕಿಗಳ ವಲಸೆಯ ರೀತಿ ಅಥವಾ ಜಾಗದ ಗುರುತು ಬಳಸಿ ಪ್ರವಾಸ ಮಾಡುತ್ತಿದ್ದರು.
ಆದರೆ ಮೋಡಗಳು ತುಂಬಾ ಇದ್ದಾಗ ಸೂರ್ಯ, ನಕ್ಷತ್ರ ಕಾಣಿಸದೇ ಭೂಮಿಯ ಮೇಲಿನ ದ್ವೀಪಗಳು ಇತ್ಯಾದಿ ಗುರುತು ಆಧರಿಸಿ ಸಮುದ್ರದ ಪಯಣ ನಡೆಸಬೇಕಿತ್ತು.
ಈ ಕಂಪಾಸ್ ಕಂಡು ಹಿಡಿದಿದ್ದು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ. ಆಗ ಹಾನ್ ವಂಶ ಆಳುತ್ತಿದ್ದ ಕಾಲ. ನೈಸರ್ಗಿಕವಾಗಿ ಚುಂಬಕ ಶಕ್ತಿ ಇರುವ ಸೂಜಿಗಲ್ಲು ಬಳಸಿ ದಿಕ್ಕುಗಳ ಪತ್ತೆ ಮಾಡುತ್ತಿದ್ದರು. ಇದನ್ನು ಮನೆ ಕಟ್ಟುವಾಗ ಇತರ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ತಿರುಗಾಟದ ಸಹಾಯಕ್ಕೆ ಬಳಸಲಾರಂಭಿಸಿದ್ದು ೧೧ನೇ ಶತಮಾನದಲ್ಲಿ! ಅಂದಾಜು ೯೫೦ ವರ್ಷಗಳ ಹಿಂದೆ ಸಾಂಗ್ ವಂಶ ಆಳ್ವಿಕೆಯಲ್ಲಿ.
ಹಿಂದೂ ಸಂಸ್ಕೃತಿಯಲ್ಲಿ ದಿಕ್ಕುಗಳು
ಹಿಂದೂ ಸಂಸ್ಕೃತಿಯ ಪ್ರಕಾರ ದಿಕ್ಕುಗಳು 10. ಈ ಪ್ರತಿಯೊಂದು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ.
ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವಕ್ಕೆ ಈಶನ, ದಕ್ಷಿಣ-ಪೂರ್ವಕ್ಕೆ ಅಗ್ನಿ, ಉತ್ತರ ಪಶ್ಚಿಮಕ್ಕೆ ವಾಯು, ದಕ್ಷಿಣ-ಪಶ್ಚಿಮಕ್ಕೆ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕಕ್ಕೆ ವಿಷ್ಣು.
ಅಂತರ್ ದಿಕ್ಕುಗಳ ಹೆಸರು ಆಯಾ ದಿಕ್ಪಾಲಕರ ಹೆಸರಿನಿಂದ ಕರೆಯಲಾಗುತ್ತದೆ.
4 ದಿಕ್ಕುಗಳು ಹಾಗೂ 4 ಅಂತರ್ ದಿಕ್ಕುಗಳನ್ನು ಮೇಲಿನ ಚಿತ್ರದಲ್ಲಿ ಕಾಣಬಹುದು.
ಮನೆ ಕಟ್ಟುವಾಗ, ಪೂಜೆ ಸಲ್ಲಿಸುವುದಕ್ಕೆ ಹೀಗೆ ಹಲವು ಕಡೆ ದಿಕ್ಕುಗಳು ಪ್ರಾಮುಖ್ಯತೆಯನ್ನು ಪಡೆದಿದೆ.
ಕನ್ನಡದಲ್ಲಿ ದಿಕ್ಕುಗಳು
ಇನ್ನು ಅಚ್ಚ ಕನ್ನಡದಲ್ಲೂ ಕೂಡಾ ದಿಕ್ಕುಗಳಿಗೆ ಪದಗಳಿದ್ದು ಆದರೆ ದಿನಬಳಕೆಯಲ್ಲಿ ಅಷ್ಟಾಗಿ ಬಳಕೆಯಾಗುತ್ತಿಲ್ಲ. ಗದ್ಯ, ಪದ್ಯ, ಗ್ರಾಂಥಿಕವಾಗಿ ಈ ಪದಗಳ ಬಳಕೆಯಲ್ಲಿದೆ.
ಪಡುವ, ಮೂಡ, ಬಡಗ ಮತ್ತು ತೆಂಕ ಇವು ದಿಕ್ಕು ಸೂಚಕ. ಇವುಗಳಿಗೆ ಅಣ್ ಪ್ರತ್ಯಯವನ್ನು ಸೇರಿಸಿ ಪಡುವಣ, ಮೂಡಣ, ಬಡಗಣ, ತೆಂಕಣ ಎನ್ನುವದು ರೂಡಿ.
ಮೂಡಣ / ಮೂಡಲು ಎಂದರೆ ಪೂರ್ವ, ಪಡುವಣ / ಪಡುವಲು ಎಂದರೆ ಪಶ್ಚಿಮ, ಬಡಗಣ / ಬಡಗಲು ಎಂದರೆ ಉತ್ತರ, ತೆಂಕಣ / ತೆಂಕು ಎಂದರೆ ದಕ್ಷಿಣ ಎಂದಾಗಿದೆ.
ಸೂಚನೆ: ೨೯ ಜುಲೈ ೨೦೧೮ ರಂದು ಬಾಲವಿಸ್ಮಯದಲ್ಲಿ ರಾಜೇಶ ಹೆಗಡೆ ಈ ಲೇಖನ ಬರೆದಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ