ಭೌತ ವಿಜ್ಞಾನ

ಭೌತ ವಿಜ್ಞಾನ

ಸಾಮಾನ್ಯ

ಸಾಮಾನ್ಯ

ಸಾಮಾನ್ಯ

ಸಾಮಾನ್ಯ

ಅ ಅ ಅನ್ನ... ಕನ್ನಡ ಸ್ವರಗಳು

ನನ್ನ ಎರಡನೆಯ ಮಗನಿಗೆ ಕನ್ನಡ ಸ್ವರ ಪರಿಚಯ ಮಾಡಲು ನಾನು ಕಟ್ಟಿದ ಹಾಡು.  ಚಿಕ್ಕವನಿದ್ದಾಗ ಈ ಹಾಡನ್ನು ಖುಷಿಯಿಂದ ಹಾಡುತ್ತಿದ್ದ. ಇಲ್ಲಿ ಹಾಗೆ ಸುಮ್ಮನೆ!

ಅ ಅನ್ನ... ಸಾಂಬಾರ್ ಬೇಕೆ ಇನ್ನ

ಆ ಆನೆ... ಕೊಡ್ಲಾ ಬಾಳೆ ಕೊನೆ

ಇ ಇರುವೆ... ಸಕ್ಕರೆ ಬೆಲ್ಲ ಕೊಡುವೆ

ಈ ಈಶ... ನಮಿಸುವೆನು ದಿವಸ


ಉ ಉರಗ... ಕಚ್ಚ ಬೇಡ್ವೋ ನನಗ

ಊ ಊಟ... ಆದ ಮೇಲೆ ಪಾಠ

ಋ ಋಷಿ... ತಪಸ್ಸಿನಲ್ಲೇ ಖುಷಿ


ಎ ಎಮ್ಮೆ... ಕೊಡುವೆಯಾ ಹಾಲು ಒಮ್ಮೆ

ಏ ಏಣಿ... ಹತ್ತಲಾ ನಿನ್ನ ಏಣಿ

ಐ ಐದು... ಕೈಲಿ ಬೆರಳು ಐದು


ಒ ಒಂಟೆ... ನಿನಗೂ ಬಾಯಾರಿಕೆ ಉಂಟೆ?

ಓ ಓದು... ಪುಸ್ತಕಾನಾ ಓದು

ಔ ಔಷದಿ... ಜ್ವರ ಬಂದಾಗ ಬೇಕ್ರಿ


ಅಂ ಅಂ ಅಂಗಡಿ... ಚಾಕ್ಲೇಟ್ ತಂದು ತಿಂತೀನಿ

ಅಃ ಅಃ ಅಃ... ನಿಂಗೂ ಬೇಕಾ ಚಹಾ!

ಓಮ್ ನ ನಿಯಮ

ಕರೆಂಟ್ ಇಲ್ಲದಿದ್ದರೆ ಇಂದು ಮನುಷ್ಯ ಬದುಕಲು ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಅದರ ಮೇಲೆ ಅವಲಂಬಿತ. ನಮ್ಮ ಸುತ್ತ ಮುತ್ತ ಇರುವ ಈ ವಿದ್ಯುತ್ ಗೆ ಸಂಬಂಧಿಸಿದ ನಿಯಮವೇ ಓಮ್ ನ ನಿಯಮ.

ಹೇಗೆ ನೀರಿನ ಪಂಪ್ ಪ್ರೆಶರ್ / ಒತ್ತಡ ಜಾಸ್ತಿ ಆದ ಹಾಗೆ ಪೈಪ್ ಅಲ್ಲಿ ನೀರಿನ ಹರಿವು ಜಾಸ್ತಿ ಆಗುತ್ತೋ ಹಾಗೆ ವೋಲ್ಟೇಜ್ ಜಾಸ್ತಿ ಆದ ಹಾಗೆ ಇಲೆಕ್ಟ್ರಾನ್ ಗಳ ಪ್ರವಾಹ ಅರ್ಥಾತ್ ವಿದ್ಯುತ್ ಹರಿವು ಜಾಸ್ತಿ ಆಗುತ್ತೆ ಅನ್ನೋದೆ ಓಮ್ ನ ನಿಯಮದ ಸಾರಾಂಶ.

ಓಮ್ ನ ನಿಯಮದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.

ಸರಳ ರೀತಿಯಲ್ಲಿ ಓಮ್ ನ ನಿಯಮ ಏನು?

ಒಂದು ತಂತಿ (ವೈರ್) ಅಲ್ಲಿ ೫ ವೋಲ್ಟ್ ವಿದ್ಯುತ್ ನೀವು ಹರಿಸುತ್ತೀರಾ ಎಂದು ಕೊಳ್ಳೋಣ. ಆಗ X ಎಂಪಿಯರ್ ಕರೆಂಟ್ ವೈರ್ ಅಲ್ಲಿ ಹರಿಯಿತು ಎಂದಿಟ್ಟು ಕೊಳ್ಳೋಣ. ಅದೇ ತಂತಿಯಲ್ಲಿ ಈಗ ನೀವು ೧೦ ವೋಲ್ಟ್ ಅಂದರೆ ಎರಡು ಪಟ್ಟು ವೋಲ್ಟೇಜ್ ವಿದ್ಯುತ್ ಹರಿಸಿದರೆ ಆಗ ೨X ಎಂಪಿಯರ್ ಕರೆಂಟ್ ಹರಿಯುತ್ತೆ. 

ಒಂದೇ ತಂತಿಯಲ್ಲಿ ಅದೇ ಅಂತರದ ನಡುವೆ ಬೇರೆ ಬೇರೆ ವೋಲ್ಟೇಜ್ ನ ವಿದ್ಯುತ್ ಹರಿಸಿದಾಗ ಕರೆಂಟ್ ಅಂದರೆ ವಿದ್ಯುತ್ ಹರಿವು ಕೂಡಾ ಅದಕ್ಕೆ ಅನುಗುಣವಾಗಿ ಬದಲಾಗುತ್ತೆ. ಇದೇ ಓಮ್ ನ ನಿಯಮ. ಇಲ್ಲಿ ಒಂದು ಕಂಡೀಶನ್ ಏನೆಂದರೆ ವೈರ್ ನ ತಾಪಮಾನ / ಗಾತ್ರ ಎಲ್ಲ ಕೂಡಾ ಹಾಗೆಯೇ ಇರಬೇಕು.

ಇದನ್ನು ನೀರಿಗೆ ಹೋಲಿಸುವದಾದರೆ ಪಂಪ್ ನಿಂದ ನೀರು ಹರಿಸಿದರೆ ಪಂಪ್ ಒತ್ತಡಕ್ಕೆ ಅನುಗುಣವಾಗಿ ನೀರಿನ ಪ್ರವಾಹ ಹೆಚ್ಚು ಕಡಿಮೆ ಆಗುತ್ತೆ ಅಲ್ವಾ? ಹೆಚ್ಚು ಪ್ರೆಶರ್ ಇದ್ದರೆ ಜಾಸ್ತಿ ವೇಗವಾಗಿ ನೀರು ಬಂದರೆ ಕಡಿಮೆ ಒತ್ತಡ ಇದ್ದಾಗ ನೀರು ನಿಧಾನವಾಗಿ ಬರುತ್ತೆ. 

ಅದೇ ರೀತಿ ಪೈಪ್ ಅಗಲ ಆಗಿದ್ದರೆ ಕಿರಿದಾದ ಪೈಪ್ ಗಿಂತ ಜಾಸ್ತಿ ನೀರಿನ ಹರಿವು ಇರುತ್ತೆ. ಪೈಪ್ ಕಿರಿದಾಗಿದ್ದರೆ ರೆಸಿಸ್ಟನ್ಸ್ ಅಥವಾ ತಡೆ ಜಾಸ್ತಿ ಇರುತ್ತೆ.

ಈ ಪರಿಕಲ್ಪನೆ ವಿದ್ಯುತ್ ಗೂ ಕೂಡಾ ಅನ್ವಯ ಆಗುತ್ತೆ.

ಓಮ್ ನ ನಿಯಮವನ್ನು ವಿವರವಾಗಿ ತಿಳಿಯುವ ಮುಂಚೆ ಅದಕ್ಕೆ ಸಂಬಂಧಿಸಿದ ಕೆಲವು ಪದಗಳ ಬಗ್ಗೆ ಅರಿಯೋಣ.

ವಿದ್ಯುತ್ ಎಂದರೆ ಏನು?

ನಮ್ಮ ಸುತ್ತ ಮುತ್ತ ಅಷ್ಟೊಂದು ಇಲೆಕ್ಟ್ರಿಕ್ ಉಪಕರಣಗಳು ವಿದ್ಯುತ್ ಸಹಾಯದಿಂದ ಕೆಲಸ ಮಾಡುವದನ್ನು ನೋಡುತ್ತೇವೆ ಅಲ್ವಾ?  ಆ ಪವರ್ ಪ್ಲಗ್ ನಿಂದ ಅಥವಾ ಬ್ಯಾಟರಿ ಸೆಲ್ ನಿಂದ ಏನು ಬಂದು ಈ ಉಪಕರಣ ಕೆಲಸ ಮಾಡುವಂತೆ ಮಾಡುತ್ತೆ? ಈ ವಿದ್ಯುತ್ ಎಂದರೆ ಏನು? ಸರಳವಾಗಿ ಹೇಳಬೇಕೆಂದರೆ ವಿದ್ಯುತ್ ಎಂದರೆ  ಇಲೆಕ್ಟ್ರಾನ್ ಗಳ ಹರಿವು ಅಥವಾ ಪ್ರವಾಹ.

ಅಂದರೆ ಆ ಪವರ್ ಪ್ಲಗ್ ನಿಂದ ಅಥವಾ ಬ್ಯಾಟರಿ ಸೆಲ್ ನಿಂದ ಬರುವದು ಇಲೆಕ್ಟ್ರಾನ್ ಗಳ ಪ್ರವಾಹ.

ಪ್ರತಿ ಅಣುವಿನಲ್ಲಿ ಇಲೆಕ್ಟ್ರಾನ್ / ಪ್ರೋಟೋನ್ / ನ್ಯೂಟ್ರೋನ್ ಎಂಬ ಮೂರು ಬಗೆಯ ಸೂಕ್ಷ್ಮ ಕಣ ಇರುತ್ತದೆ. ಈ ಇಲೆಕ್ಟ್ರಾನ್ ಗಳಿಗೆ ಚಾರ್ಜ್ ಮೂಲಕ ಶಕ್ತಿ ದೊರೆತಾಗ ಅವು ಚಲಿಸಲಾರಂಭಿಸುತ್ತವೆ. ಹೀಗೆ ಇಲೆಕ್ಟ್ರಾನ್ ಗಳು ಒಂದು ಅಣುವಿನಿಂದ ಇನ್ನೊಂದಕ್ಕೆ ಹರಿಯುತ್ತಾ ಹೋದಾಗ ಅದೇ ಇಲೆಕ್ಟ್ರಿಕ್ ಪ್ರವಾಹ (ಕರೆಂಟ್). ಈ ಇಲೆಕ್ಟ್ರಾನ್ ಗಳ ಪ್ರವಾಹವನ್ನೇ ನಾವು ವಿದ್ಯುತ್ ಎನ್ನುತ್ತೇವೆ.

ಒಂದು ವಿಷಯ ಗಮನದಲ್ಲಿಡಿ ಸರ್ಕ್ಯುಟ್ ಪೂರ್ಣ ಆದಾಗ ಮಾತ್ರ ಈ ಇಲೆಕ್ಟ್ರಾನ್ ಗಳ ಪ್ರವಾಹ ಹರಿಯುವದು.

ಈ ಇಲೆಕ್ಟ್ರಾನ್ ಗಳ ಚಲನೆ ಶಕ್ತಿಯನ್ನು ಉಪಕರಣಗಳು ಬಿಸಿ / ಮ್ಯಾಗ್ನೆಟಿಕ್ / ಬೆಳಕು ಇತ್ಯಾದಿ ಬೇರೆ ರೂಪಕ್ಕೆ ಬದಲಾಯಿಸಿ ಕೆಲಸ ಮಾಡುತ್ತವೆ.

ವಿದ್ಯುತ್ ಎಲ್ಲಿ ಹರಿಯುತ್ತದೆ?

ನೀರನ್ನು ನಾವು ಪೈಪ್ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಸಬಹುದು ಅಲ್ವಾ?

ಅದೇ ರೀತಿ ವಿದ್ಯುತ್ ಪ್ರವಾಹ ಹರಿಯಲು ಮಾರ್ಗ ಬೇಕು ಅಲ್ವಾ? ಅದೇ ವಿದ್ಯುತ್ ವಾಹಕ.

ವಿದ್ಯುತ್ ನಮ್ಮ ಸುತ್ತ ಇರುವ ಸಾಮಾನ್ಯ ಗಾಳಿಯಲ್ಲಿ ಹರಿಯದು. ಈ ಇಲೆಕ್ಟ್ರಾನ್ ಪ್ರವಾಹ ಹರಿಯಲು ಇಲೆಕ್ಟ್ರಾನ್ ಗಳು ಸುಲಭ ಹರಿಯಲು ಅನುಕೂಲ ಮಾಡಿ ಕೊಡುವ ವಸ್ತು ಬೇಕು. ಅದನ್ನೇ ಕಂಡಕ್ಟರ್ ಅಥವಾ ವಾಹಕ ಎನ್ನುವದು.

ಕಬ್ಬಿಣ(ಐರನ್), ತಾಮ್ರ(ಕಾಪರ್), ಅಲ್ಯುಮಿನಿಯಂ, ಕಂಚು(ಬ್ರಾಸ್) ಹೀಗೆ ಹಲವು ಲೋಹಗಳ ತಂತಿಗಳು ವಿದ್ಯುತ್ ಪ್ರವಾಹ ಹರಿಯಲು ಸೂಕ್ತ ವಾಹಕ(ಕಂಡಕ್ಟರ್) ಆಗಿದೆ.  ಮರ, ಪ್ಲಾಸ್ಟಿಕ್ ಮೊದಲಾದವುಗಳ ವಸ್ತುಗಳು ಈ ಇಲೆಕ್ಟ್ರಾನ್ ಗಳಿಗೆ ಹರಿಯಲು ಬಿಡುವದಿಲ್ಲ. ಅವುಗಳನ್ನು ಅವಾಹಕ(ನಾನ್ ಕಂಡಕ್ಟರ್) ಎನ್ನಬಹುದು.

ವೋಲ್ಟೇಜ್ ಪರಿಚಯ

ಈ ಇಲೆಕ್ಟ್ರಾನ್ ಗಳು ಚಲಿಸಲು ಒತ್ತಡ ಅವಶ್ಯಕ. ಅದು ಇದ್ದರೆ ಮಾತ್ರ ಇಲೆಕ್ಟ್ರಾನ್ ಒಂದು ಕಡೆಯಿಂದ ಇನ್ನೊಂದು ಕಡೆ ವಾಹಕದಲ್ಲಿ ಚಲಿಸುತ್ತವೆ. ಈ ಇಲೆಕ್ಟ್ರಾನ್ ಗಳನ್ನು ತಂತಿಯ ಮೂಲಕ ತಳ್ಳುವ ಒತ್ತಡಕ್ಕೆ ವೋಲ್ಟೇಜ್ ಎನ್ನುತ್ತಾರೆ.

ಇದನ್ನು ವೋಲ್ಟ್ (V) ನಲ್ಲಿ ಅಳೆಯುತ್ತಾರೆ.

ರೆಸಿಸ್ಟನ್ಸ್ / ಪ್ರತಿರೋಧ ಎಂದರೇನು?

ಎಲ್ಲಾ ವಾಹಕಗಳೂ ಇಲೆಕ್ಟ್ರಾನ್ ಗಳನ್ನು ಸುಲಭವಾಗಿ ಹೋಗೊದಕ್ಕೆ ಬಿಡದು. ಕೆಲವು ಇಲೆಕ್ಟ್ರಾನ್ ಗಳಿಗೆ ಜಾಸ್ತಿ ತಡೆ ಒಡ್ಡಿದರೆ ಇನ್ನು ಕೆಲವು ಸುಲಭವಾಗಿ ಹೋಗಲು ದಾರಿ ಮಾಡಿ ಕೊಡುತ್ತವೆ. ಇಲೆಕ್ಟ್ರಾನ್ ಗಳ ಪ್ರವಾಹಕ್ಕೆ ವಾಹಕ ಒಡ್ಡುವ ತಡೆಯನ್ನು ರೆಸಿಸ್ಟನ್ಸ್ / ಪ್ರತಿರೋಧ / ತಡೆ ಎನ್ನುವದು.

ಇದನ್ನು ಓಮ್ಸ್ ನಲ್ಲಿ ಅಳೆಯುತ್ತಾರೆ.

ಕರೆಂಟ್ / ವಿದ್ಯುತ್ ಎಂದರೇನು?

ಈ ಇಲೆಕ್ಟ್ರಾನ್ ಗಳ ಪ್ರವಾಹವನ್ನು ಕರೆಂಟ್ / ವಿದ್ಯುತ್ ಎನ್ನುತ್ತಾರೆ. ಜಾಸ್ತಿ ಇಲೆಕ್ಟ್ರಾನ್ ಗಳು ತಂತಿಯಲ್ಲಿ ಹರಿಯುತ್ತಿದ್ದರೆ ಕರೆಂಟ್ ಜಾಸ್ತಿ ಎಂದರ್ಥ. ಇದನ್ನು ಎಂಪಿಯರ್ (A) ನಲ್ಲಿ ಅಳೆಯುತ್ತಾರೆ.

ಓಮ್ ನ ನಿಯಮ ಕಂಡು ಹಿಡಿದಿದ್ದು ಯಾರು?


ಜರ್ಮನಿಯ ಭೌತಿಕ ಶಾಸ್ತ್ರಜ್ಞ (ಫಿಸಿಸ್ಟ್) ಆದ ಜಾರ್ಜ್ ಸೈಮನ್ ಓಮ್ (Georg Simon Ohm) ಅವರು ವೋಲ್ಟೇಜ್ ಹಾಗೂ ವಿದ್ಯುತ್ ಹರಿವಿನ (ಕರೆಂಟ್) ನಡುವಿನ ಸಂಬಂಧವನ್ನು ತನ್ನ ಪ್ರಯೋಗಗಳಿಂದ ಕಂಡು ಹಿಡಿದರು. 1827ರಲ್ಲಿ ಕಂಡು ಹಿಡಿದ ಆ ನಿಯಮವನ್ನು ಅವರ ಹೆಸರಿನಲ್ಲೇ ಓಮ್ ನ ನಿಯಮ ಎಂದು ಕರೆಯಲಾಗುತ್ತದೆ.
ಚಿತ್ರ ಕೃಪೆ: ವಿಕಿಮಿಡಿಯಾ

ಓಮ್ ನ ನಿಯಮ

ಒಂದು ವಾಹಕದಲ್ಲಿ ಎರಡು ಬಿಂದುಗಳ ನಡುವೆ ಹರಿಯುವ ಕರೆಂಟ್ ಅದರ ನಡುವಿನ ವೋಲ್ಟೇಜ್ ಗೆ ನೇರ ಅನುಪಾತದಲ್ಲಿರುತ್ತದೆ ಇದೇ ಒಮ್ ನ ನಿಯಮ.

I ∝ V

ಅಂದರೆ ವೋಲ್ಟೇಜ್ ಜಾಸ್ತಿ ಆದ ಹಾಗೆ ಕರೆಂಟ್ ಹರಿಯುವಿಕೆ ಅದೇ ವಾಹಕದಲ್ಲಿ ಅಷ್ಟೇ ಪ್ರಮಾಣದಲ್ಲಿ ಜಾಸ್ತಿ ಆಗುತ್ತದೆ. ವೋಲ್ಟೇಜ್ ಕಡಿಮೆ ಆದ ಹಾಗೆ ಕರೆಂಟ್ ಕಡಿಮೆ ಆಗುತ್ತದೆ.

ವಾಹಕದ ಉದ್ದ / ಅಗಲ, ವಾತಾವರಣದ ತಾಪಮಾನ (ಟೆಂಪರೇಚರ್) ಎಲ್ಲಾ ಮೊದಲಿನಷ್ಟೇ ಇರಬೇಕು.

ಓಮ್ ನ ನಿಯಮದ ಸೂತ್ರ

V ಎಂದರೆ ವೋಲ್ಟೇಜ್ ಅಂದು ಕೊಂಡರೆ, I ಎಂದರೆ ಕರೆಂಟ್ ಆಗಿದ್ದರೆ R ಎಂಬುದು ಈ ವಾಹಕದ ಪ್ರತಿರೋಧ ಇರಲಿ ಆಗ ಈ ಮುಂದಿನ ಸಮೀಕರಣ ಒಮ್ ನ ನಿಯಮದ ಸೂತ್ರ ಆಗುತ್ತದೆ.

ವಾಹಕದ ಪ್ರತಿರೋಧ ಅದರ ವಸ್ತುವಿನ ಮೇಲೆ ಆಧಾರಿತ ಆಗಿರುತ್ತದೆ. ಪ್ರತಿ ವಸ್ತುವಿನ ಪ್ರತಿರೋಧ ಬೇರೆ ಬೇರೆ ಇರುತ್ತೆ. 

ಅಷ್ಟೇ ಅಲ್ಲ ಆ ವಾಹಕದ ಉದ್ದ, ಅಗಲ ಕೂಡಾ ಪ್ರತಿರೋಧವನ್ನು ನಿರ್ಧರಿಸುತ್ತದೆ. ವಾಹಕ ಉದ್ದ ಆಗಿದ್ದಷ್ಟು ಪ್ರತಿರೋಧ ಜಾಸ್ತಿ. ಅಗಲ ಜಾಸ್ತಿ ಇದ್ದಷ್ಟು ಪ್ರತಿರೋಧ ಕಡಿಮೆ.

V = IR 

ಇಲ್ಲಿV = ವೋಲ್ಟೇಜ್, I = ಕರೆಂಟ್ , R= ರೆಸಿಸ್ಟನ್ಸ್ / ಪ್ರತಿರೋಧ

ಓಮ್ ನ ನಿಯಮ ಎಲ್ಲಿ ಅನ್ವಯ ಆಗುವದಿಲ್ಲ?

ಓಮ್ ನ ನಿಯಮ ಅನ್ವಯ ಆಗಲು ತಾಪಮಾನ ಒಂದೇ ರೀತಿ ಇರಬೇಕು. ಅಕಸ್ಮಾತ್ ಕರೆಂಟ್ ಜಾಸ್ತಿ ಆದ ಹಾಗೆ ವಾಹಕದ ತಾಪ (ಬಿಸಿ) ಜಾಸ್ತಿ ಆಗುತ್ತಿದ್ದರೆ ಓಮ್ ನ ನಿಯಮ ಅನ್ವಯ ಆಗದು.

ತೆಳುವಾದ ಟಂಗಸ್ಟನ್ ತಂತಿ(ವೈರ್), ಸೆಮಿಕಂಡಕ್ಟರ್ ಇತ್ಯಾದಿಗಳಿಗೆ ಓಮ್ ನ ನಿಯಮ ಅನ್ವಯ ಆಗದು. ಯಾಕೆಂದರೆ ಅವುಗಳು ಕರೆಂಟ್ ಜಾಸ್ತಿ ಆದಂತೆ ಅಥವಾ ಜಾಸ್ತಿ ಹೊತ್ತು ಹರಿದಂತೆ ಬಿಸಿ ಆಗುತ್ತಾ ಹೋಗುತ್ತೆ. ಆಗ ಈ ನಿಯಮ ಹೊಂದಿಕೆ ಆಗದು.

ಹೆಚ್ಚಿನ ಲೋಹ ಹಾಗೂ ಮಿಶ್ರ ಲೋಹಗಳಿಗೆ ಓಮ್ ನ ನಿಯಮ ಅನ್ವಯ ಆಗುತ್ತೆ. ಈ ರೀತಿ ಓಮ್ ನ ನಿಯಮ ಅನ್ವಯ ಆದರೆ ಆ ವಸ್ತುವಿಗೆ ಓಮಿಕ್ ಮಟೀರಿಯಲ್ ಎಂದು ಕರೆಯುತ್ತಾರೆ. ಆಗದಿದ್ದರೆ ನಾನ್ ಓಮಿಕ್ ಮಟೀರಿಯಲ್ ಎನ್ನುತ್ತಾರೆ.

ಕಬ್ಬಿಣ, ಅಲ್ಯುಮಿನಿಯಂ, ತಾಮ್ರ ಎಲ್ಲ ಓಮಿಕ್ ಆಗಿದ್ದರೆ ಸೆಮಿಕಂಡಕ್ಟರ್ ನಾನ್ ಓಮಿಕ್ ಆಗಿವೆ.

ಸೂಪರ್ ಕಂಡಕ್ಟರ್ ಗೂ ಕೂಡಾ ಓಮ್ಸ್ ನ ನಿಯಮ ಅನ್ವಯ ಆಗದು.

೧ ಓಮ್ ಪ್ರತಿರೋಧ (ರೆಸಿಸ್ಟನ್ಸ್) ಎಷ್ಟು?

೧ ವೋಲ್ಟ್ ವೋಲ್ಟೇಜ್ ಅನ್ನು ಒಂದು ವಾಹಕ (ಕಂಡಕ್ಟರ್) ಗೆ ಕೊಟ್ಟರೆ ೧ ಎಂಪಿಯರ್ ಕರೆಂಟ್(ವಿದ್ಯುತ್) ಅದರಲ್ಲಿ ಹರಿದರೆ ಆಗ ಆ ವಾಹಕ ೧ ಓಮ್ ರೆಸಿಸ್ಟನ್ಸ್ / ಪ್ರತಿರೋಧ / ತಡೆ ಹೊಂದಿದೆ ಎನ್ನುತ್ತಾರೆ.

ಕೊನೆಯ ಮಾತು

ಓಮ್ ನ ನಿಯಮ ಒಂದು ಇಲೆಕ್ಟ್ರಿಕ್ ಸರ್ಕ್ಯುಟ್ ಗೆ ಸಂಬಂಧಿಸಿದ ಲೆಕ್ಕಾಚಾರಕ್ಕೆ ಅನುಕೂಲ. ವೋಲ್ಟೇಜ್ ಜಾಸ್ತಿ ಆದ ಹಾಗೆ ಇಲೆಕ್ಟ್ರಾನ್ ಗಳ ಪ್ರವಾಹ ಜಾಸ್ತಿ ಆಗುತ್ತೆ. 

ಚಿತ್ರಕೃಪೆ: Bruno /Germany from Pixabay 
ಚಿತ್ರಕೃಪೆ: Tom from Pixabay 
ಚಿತ್ರಕೃಪೆ: burlesonmatthew from Pixabay

ದಿಕ್ಕುಗಳು

ಅನಾದಿ ಕಾಲದಿಂದಲೂ ಮನುಷ್ಯನ ತಿರುಗಾಟ, ಸಂಸ್ಕೃತಿ ಹಾಗೂ ಭಕ್ತಿಯ ನಂಬಿಕೆಗಳಿಗೆ ದಿಕ್ಕುಗಳು ಅವಿಭಾಜ್ಯ ಅಂಗವಾಗಿವೆ.

ಇಂದು ಆಧುನಿಕ ಯುಗದಲ್ಲಿ ಇತ್ತೀಚೆಗೆ ನಾವು ರಾಕೆಟ್, ಉಪಗ್ರಹ ಎಲ್ಲ ಬಳಸಿ ಉತ್ತರ ದಿಕ್ಕಿಗೆ ಭೂಮಿಯ ಉತ್ತರ ಧ್ರುವ, ದಕ್ಷಿಣ ದಿಕ್ಕಿಗೆ ದಕ್ಷಿಣ ಧ್ರುವ ಎಂಬುದೆಲ್ಲ ತಿಳಿದಿದ್ದೇವೆ. 

ಆದರೆ ಹಿಂದೆ ಅದೆಲ್ಲ ಮನುಷ್ಯನಿಗೆ ಗೊತ್ತಿರಲಿಲ್ಲ. ಭೂಮಿಯ ಮೇಲಿಂದ ಕಣ್ಣಿಗೆ ಕಾಣುತ್ತಿದ್ದುದು ಸೂರ್ಯ, ಚಂದ್ರ, ನಕ್ಷತ್ರಗಳು ಮಾತ್ರ!  ಕೆಲವರು ಭೂಮಿ ಚಪ್ಪಟೆ ಇದೆಯೆಂದು ಅದರ ತೀರಾ ಅಂಚಿನ ಹೊರಗೆ ಹೋದರೆ ಅಂತರಿಕ್ಷಕ್ಕೆ ಟೊಂಯ್... ಎಂದು ಬಿದ್ದು ಹೋಗುತ್ತೇವೆ ಕೂಡಾ ಎಂದು ನಂಬಿದ್ದರು!

ಹಿಂದೆ ಕಣ್ಣಿಗೆ ಕಾಣುವ ಸೂರ್ಯನ ಚಲನೆಯ ಆಧಾರದ ಮೇಲೆ ದಿಕ್ಕುಗಳನ್ನು ಮನುಷ್ಯ ಗುರುತಿಸುತ್ತಿದ್ದ.

ಪ್ರತಿದಿನ ಬೆಳಿಗ್ಗೆ ಸೂರ್ಯ ಮೂಡುವ ದಿಕ್ಕಿಗೆ ಒಂದು ಹೆಸರಿಟ್ಟ, ಮುಳುಗುವ ದಿಕ್ಕಿಗೆ ಇನ್ನೊಂದು. ಅವೆರಡರ ನಡುವಿನ ದಿಕ್ಕುಗಳಿಗೆ ಇನ್ನೆರಡು ಹೆಸರು.

ಗುಡ್ಡ ಕಾಡುಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಟ ಮಾಡುವಾಗ ಜಾಗದ ಗುರುತು, ಸೂರ್ಯನ ಸ್ಥಾನ ಇತ್ಯಾದಿ ಆಧಾರದ ಮೇಲೆ ಹೋಗುತ್ತಾ ಇದ್ದ.

ದಿಕ್ಕುಗಳು ಯಾವುವು?

ಸೂರ್ಯ ಮೂಡಿ ಬಂದ ಅಂದರೆ ಉದಯ ಆಗುವ  ದಿಕ್ಕು ಪೂರ್ವ ಅರ್ಥಾತ್ ಮೂಡಣ (ಮೂಡಲ) ಎಂದು ಕರೆದ. ಸೂರ್ಯ ಮುಳುಗುವ ದಿಕ್ಕನ್ನು ಪಶ್ಚಿಮ / ಪಡುವಣ (ಪಡುವಲ) ಎಂದು ಗುರುತಿಸಿದ.

ಉಳಿದ ಎರಡು ಲಂಬವಾಗಿರುವ ದಿಕ್ಕುಗಳು ಉತ್ತರ (ಬಡಗಣ) ಹಾಗೂ ದಕ್ಷಿಣ (ತೆಂಕಣ) ಎಂದು ಕರೆಯಲ್ಪಟ್ಟಿತು. 

ದಿಕ್ಕುಗಳು ಮುಖ್ಯವಾಗಿ ನಾಲ್ಕು 
  • ಉತ್ತರ (ಬಡಗಣ / ಬಡಗಲು)
  • ದಕ್ಷಿಣ (ತೆಂಕಣ / ತೆಂಕು)
  • ಪೂರ್ವ (ಮೂಡಣ / ಮೂಡಲು)
  • ಪಶ್ಚಿಮ (ಪಡುವಣ / ಪಡುವಲು)

ವಾಸ್ತವಿಕವಾಗಿ ದಿಕ್ಕುಗಳು ಭೂಮಿಯ ಹಾಗೂ ಅದರ ಚಲನೆಯ ಆಧಾರದ ಮೇಲೆ  ಗುರುತಿಸಲಾಗುತ್ತದೆ. ನಾವು ಭೂಮಿಯ ಮೇಲೆ ಎಲ್ಲೇ ನಿಂತರೂ ಉತ್ತರ ದಿಕ್ಕು ಎಂದರೆ ಭೂಮಿಯ ಉತ್ತರ ಧ್ರುವದ ಕಡೆಗೆ ಹಾಗೇ ದಕ್ಷಿಣ ದಿಕ್ಕು ಭೂಮಿಯ ದಕ್ಷಿಣ ಧ್ರುವದ ಕಡೆಗೆ ಎಂದರ್ಥ.

ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ವನ್ನು ತೋರಿಸುತ್ತದೆ.


ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ದಿಕ್ಕಿನಲ್ಲಿ ತಿರುಗುತ್ತದೆ. ಪೂರ್ವ ಹಾಗು ಪಶ್ಚಿಮ ವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಮುಳುಗುವ ಅರ್ಥಾತ್ ಅಸ್ತಮಿಸುವೆ ದಿಕ್ಕು ಪಶ್ಚಿಮ ಆಗಿರುತ್ತದೆ.

ಈ ಮೇಲಿನ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕು ಗಳೆಂದು ಕರೆಯುತ್ತಾರೆ. ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಇವು ಅಂತರ್ ದಿಕ್ಕು ಗಳಾಗಿವೆ.

ಕಂಪಾಸ್ ಸಾಧನ


ದಿಕ್ಕುಗಳನ್ನು ಕಂಡು ಹಿಡಿಯುವ ಸಾಧನವನ್ನು ಕಂಪಾಸ್ ಎಂದು ಕರೆಯುತ್ತಾರೆ.

ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ಅಥವಾ ಚುಂಬಕದಂತೆ ವರ್ತಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್  ಮೇಲಿನ ದಿಕ್ಕುಗಳ ಗುರುತನ್ನ ಕೆಳಗಿನ ಚಿತ್ರದಲ್ಲಿ ಕಾಣ ಬಹುದು.

ಕಂಪಾಸ್ ಸಾಧನ ಕಂಡು ಹಿಡಿಯುವ ಮುನ್ನ ಸೂರ್ಯ ನ ಸ್ಥಾನ, ನಕ್ಷತ್ರಗಳು, ಹಕ್ಕಿಗಳ ವಲಸೆಯ ರೀತಿ ಅಥವಾ ಜಾಗದ ಗುರುತು ಬಳಸಿ ಪ್ರವಾಸ ಮಾಡುತ್ತಿದ್ದರು.

ಆದರೆ ಮೋಡಗಳು ತುಂಬಾ ಇದ್ದಾಗ ಸೂರ್ಯ, ನಕ್ಷತ್ರ ಕಾಣಿಸದೇ ಭೂಮಿಯ ಮೇಲಿನ ದ್ವೀಪಗಳು ಇತ್ಯಾದಿ ಗುರುತು ಆಧರಿಸಿ ಸಮುದ್ರದ ಪಯಣ ನಡೆಸಬೇಕಿತ್ತು.

ಈ ಕಂಪಾಸ್ ಕಂಡು ಹಿಡಿದಿದ್ದು ೨೦೦೦ ವರ್ಷಗಳ ಹಿಂದೆ ಚೀನಾದಲ್ಲಿ. ಆಗ ಹಾನ್ ವಂಶ ಆಳುತ್ತಿದ್ದ ಕಾಲ. ನೈಸರ್ಗಿಕವಾಗಿ ಚುಂಬಕ ಶಕ್ತಿ ಇರುವ ಸೂಜಿಗಲ್ಲು ಬಳಸಿ ದಿಕ್ಕುಗಳ ಪತ್ತೆ ಮಾಡುತ್ತಿದ್ದರು. ಇದನ್ನು ಮನೆ ಕಟ್ಟುವಾಗ ಇತರ ಉದ್ದೇಶಗಳಿಗೆ ಬಳಸಲಾಗುತ್ತಿತ್ತು.  ತಿರುಗಾಟದ ಸಹಾಯಕ್ಕೆ ಬಳಸಲಾರಂಭಿಸಿದ್ದು ೧೧ನೇ ಶತಮಾನದಲ್ಲಿ! ಅಂದಾಜು ೯೫೦ ವರ್ಷಗಳ ಹಿಂದೆ ಸಾಂಗ್ ವಂಶ ಆಳ್ವಿಕೆಯಲ್ಲಿ.

ಹಿಂದೂ ಸಂಸ್ಕೃತಿಯಲ್ಲಿ ದಿಕ್ಕುಗಳು

ಹಿಂದೂ ಸಂಸ್ಕೃತಿಯ ಪ್ರಕಾರ ದಿಕ್ಕುಗಳು 10. ಈ ಪ್ರತಿಯೊಂದು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ.

ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವಕ್ಕೆ ಈಶನ, ದಕ್ಷಿಣ-ಪೂರ್ವಕ್ಕೆ ಅಗ್ನಿ, ಉತ್ತರ ಪಶ್ಚಿಮಕ್ಕೆ ವಾಯು, ದಕ್ಷಿಣ-ಪಶ್ಚಿಮಕ್ಕೆ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕಕ್ಕೆ ವಿಷ್ಣು.

ಅಂತರ್ ದಿಕ್ಕುಗಳ ಹೆಸರು ಆಯಾ ದಿಕ್ಪಾಲಕರ ಹೆಸರಿನಿಂದ ಕರೆಯಲಾಗುತ್ತದೆ. 

4 ದಿಕ್ಕುಗಳು ಹಾಗೂ 4 ಅಂತರ್ ದಿಕ್ಕುಗಳನ್ನು ಮೇಲಿನ ಚಿತ್ರದಲ್ಲಿ ಕಾಣಬಹುದು.

ಮನೆ ಕಟ್ಟುವಾಗ, ಪೂಜೆ ಸಲ್ಲಿಸುವುದಕ್ಕೆ ಹೀಗೆ ಹಲವು ಕಡೆ ದಿಕ್ಕುಗಳು ಪ್ರಾಮುಖ್ಯತೆಯನ್ನು ಪಡೆದಿದೆ.

ಕನ್ನಡದಲ್ಲಿ ದಿಕ್ಕುಗಳು

ಇನ್ನು ಅಚ್ಚ ಕನ್ನಡದಲ್ಲೂ ಕೂಡಾ ದಿಕ್ಕುಗಳಿಗೆ ಪದಗಳಿದ್ದು ಆದರೆ ದಿನಬಳಕೆಯಲ್ಲಿ ಅಷ್ಟಾಗಿ ಬಳಕೆಯಾಗುತ್ತಿಲ್ಲ. ಗದ್ಯ, ಪದ್ಯ, ಗ್ರಾಂಥಿಕವಾಗಿ ಈ ಪದಗಳ ಬಳಕೆಯಲ್ಲಿದೆ.

ಪಡುವ, ಮೂಡ, ಬಡಗ ಮತ್ತು ತೆಂಕ ಇವು ದಿಕ್ಕು ಸೂಚಕ. ಇವುಗಳಿಗೆ ಅಣ್ ಪ್ರತ್ಯಯವನ್ನು ಸೇರಿಸಿ  ಪಡುವಣ, ಮೂಡಣ, ಬಡಗಣ, ತೆಂಕಣ ಎನ್ನುವದು ರೂಡಿ. 

ಮೂಡಣ / ಮೂಡಲು ಎಂದರೆ ಪೂರ್ವ, ಪಡುವಣ / ಪಡುವಲು ಎಂದರೆ ಪಶ್ಚಿಮ, ಬಡಗಣ / ಬಡಗಲು ಎಂದರೆ ಉತ್ತರ, ತೆಂಕಣ / ತೆಂಕು ಎಂದರೆ ದಕ್ಷಿಣ ಎಂದಾಗಿದೆ.

ಸೂಚನೆ: ೨೯ ಜುಲೈ ೨೦೧೮ ರಂದು ಬಾಲವಿಸ್ಮಯದಲ್ಲಿ ರಾಜೇಶ ಹೆಗಡೆ ಈ ಲೇಖನ ಬರೆದಿದ್ದರು.


ಹೋಲಿಕೆಯ ದಿಕ್ಕುಗಳು

ಒಂದು ವ್ಯಕ್ತಿ, ವಸ್ತು ಅಥವಾ ಸ್ಥಳಕ್ಕೆ ಸಂಬಂಧಿಸಿದ ಹಾಗೆ ಕಾಣಿಸುವ ದಿಕ್ಕುಗಳನ್ನು ಸಂಬಂಧಿತ ದಿಕ್ಕು ಅಂತ ಕರೆಯಬಹುದು. ಇದನ್ನು ಹೋಲಿಕೆಯ ಅಥವಾ ತುಲನಾತ್ಮಕ ದಿಕ್ಕು ಅಂತಾನೂ ಹೇಳಬಹುದು.

ಇದು ಸಂಪೂರ್ಣವಾಗಿ ಆಯಾ ವ್ಯಕ್ತಿ, ವಸ್ತು ನಿಂತಿರುವ ದಿಕ್ಕಿನ ಮೇಲೆ ಅವಲಂಭಿಸಿರುತ್ತದೆ.

  • ಎಡ 
  • ಬಲ 
  • ಮುಂದೆ 
  • ಹಿಂದೆ 
  • ಮೇಲೆ 
  • ಕೆಳಗೆ

ಬೇರೆ ಭಾಷೆಗಳಲ್ಲಿ ಇದೇ ಸಂಬಂಧಿತ ದಿಕ್ಕುಗಳಿಗೆ ಏನನ್ನುತ್ತಾರೆ ನೋಡೋಣ.

ಕನ್ನಡಇಂಗ್ಲೀಷ್ಸಂಸ್ಕೃತ
ಎಡಲೆಫ್ಟ್ವಾಮ / ಉತ್ತರ
ಬಲರೈಟ್ದಕ್ಷಿಣ
ಮುಂದೆಫ್ರಂಟ್ಪುರ
ಹಿಂದೆಬ್ಯಾಕ್ಪೃಷ್ಟ
ಮೇಲೆಅಪ್ಉಪರಿ
ಕೆಳಗೆಡೌನ್ಅಧಃ

ಪ್ರತಿ ವಸ್ತು / ವ್ಯಕ್ತಿ ಹೋಲಿಕೆಯ ದಿಕ್ಕು ಬೇರೆ ಬೇರೆ

 ಇಬ್ಬರು ವ್ಯಕ್ತಿಗಳು ಬೇರೆ ಬೇರೆ ದಿಕ್ಕಿನಲ್ಲಿ ನಿಂತಿದ್ದರೆ ಅದಕ್ಕೆ ಅನುಗುಣವಾಗಿ ಅವರ ಸಂಬಂಧಿತ ದಿಕ್ಕುಗಳು ಬದಲಾಗುತ್ತದೆ. 

ವಸ್ತು, ವ್ಯಕ್ತಿ ಹಾಗೂ ಸ್ಥಳದ ಮುಂಭಾಗ ಗುರುತಿಸಲು ಸಾಧ್ಯವಿದ್ದರೆ ಮಾತ್ರ ಎಡ, ಬಾಲ ಹಾಗೂ ಹಿಂಭಾಗ ಗುರುತಿಸಬಹುದು. ಇಲ್ಲದಿದ್ದರೆ ಆಗದು.

ಭೂಮಿಯ ದಿಕ್ಕಿಗೆ ಆಧಾರಿತ ಅಲ್ಲ

ಸಂಬಂಧಿತ ದಿಕ್ಕುಗಳು ಭೂಮಿಯ ದಿಕ್ಕುಗಳ ಮೇಲೆ ಆಧಾರಿತವಾಗಿಲ್ಲ. ವಸ್ತು ಅಥವಾ ವ್ಯಕ್ತಿ ಉತ್ತರಕ್ಕೆ ಇರಲಿ ಅಥವಾ ದಕ್ಷಿಣಕ್ಕೆ ಮುಖ ಮಾಡಿರಲಿ ಅದರ ಸಂಬಂಧಿತ ದಿಕ್ಕುಗಳು ಬದಲಾಗುವುದಿಲ್ಲ. ಅದು ಆಯಾ ವ್ಯಕ್ತಿ ಅಥವಾ ವಸ್ತು ಯಾವ ಕಡೆ ಮುಖ ಮಾಡಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತೆ.

ಆದರೆ ಕಂಪಾಸ್ ದಿಕ್ಕು ಅವರಿಬ್ಬರಿಗೂ ಒಂದೇ. 

ಉದಾಹರಣೆ: ಉತ್ತರ ದಿಕ್ಕು ಅನ್ನುವದು ಇಬ್ಬರು ವ್ಯಕ್ತಿ ಎಲ್ಲೇ ಮುಖ ಮಾಡಿದ್ದರೂ ಅದು ಒಂದೇ.

ಸುತ್ತ-ಮುತ್ತ

ಅಕಸ್ಮಾತ್ ನಿರ್ದಿಷ್ಟ ದಿಕ್ಕು ಅಗತ್ಯ ವಿಲ್ಲದಿದ್ದರೆ ಅಕ್ಕ-ಪಕ್ಕ, ಆಜು-ಬಾಜೂ ಅಥವಾ ಸುತ್ತ-ಮುತ್ತ ಎನ್ನಬಹುದು. 

ಇದು ಆ ವ್ಯಕ್ತಿ, ಸ್ಥಳ ಅಥವಾ ವಸ್ತುವಿನ ಸುತ್ತಲಿನ ಎಲ್ಲ ಸಂಬಂಧಿತ ದಿಕ್ಕುಗಳನ್ನು ಸೂಚಿಸುತ್ತದೆ.

ಅಭ್ಯಾಸ: ಮಕ್ಕಳನ್ನು ಬೇರೆ ಬೇರೆ ದಿಕ್ಕಲ್ಲಿ ನಿಲ್ಲಿಸಿ ಅವರ ಸಂಬಂಧಿತ ದಿಕ್ಕುಗಳನ್ನು ಗುರುತಿಸುವಂತೆ ಹೇಳಿ.

ಮೂಲ ಲೇಖನ ಜುಲೈ ೧೯ ೨೦೧೮ ರಂದು ಬಾಲವಿಸ್ಮಯದಲ್ಲಿ ರಾಜೇಶ ಹೆಗಡೆ ಅವರಿಂದ ಪ್ರಕಟವಾಗಿತ್ತು.

ಭಾಗಗಳು - ಕಾಲು, ಅರ್ಧ, ಮುಕ್ಕಾಲು ಹಾಗೂ ಪೂರ್ಣ

ಒಂದು ವಸ್ತುವಿನ ರಾಶಿಯ ಪ್ರಮಾಣವನ್ನು ಹಲವು  ರೀತಿಯಲ್ಲಿ ಭಾಗವಾಗಿ ವಿಭಾಗಿಸಬಹುದು.

ಅರ್ಧ ಭಾಗ

ಒಂದು ವಸ್ತುವನ್ನು ಎರಡು  ಸಮ ಭಾಗ ಮಾಡಿದರೆ ಎರಡು ಅರ್ಧ ಭಾಗ ಆಗುತ್ತದೆ.

ಅರ್ಧ ಭಾಗ ಎಂದರೆ ಎರಡನೇಯ ಒಂದು ಭಾಗ. ಅಂದರೆ 1/2 ಅಥವಾ 50% ಪಾಲು ಆಗುತ್ತದೆ.

ಕಾಲು ಭಾಗ

ಒಂದು ವಸ್ತುವನ್ನು ನಾಲ್ಕು ಸಮ ಭಾಗ ಮಾಡಿದರೆ ನಾಲ್ಕು ಕಾಲು ಭಾಗ ಆಗುತ್ತದೆ.

ಕಾಲು ಭಾಗ ಎಂದರೆ ನಾಲ್ಕನೇಯ ಒಂದು ಭಾಗ. ಅಂದರೆ 1/4 ಅಥವಾ 25% ಪಾಲು ಆಗುತ್ತದೆ.

ಮುಕ್ಕಾಲು ಭಾಗ

ಒಂದು ವಸ್ತುವಿನಿಂದ ಕಾಲು ಭಾಗ ತೆಗೆದರೆ ಮುಕ್ಕಾಲು ಭಾಗ ಉಳಿಯುತ್ತದೆ.

ಮುಕ್ಕಾಲು ಭಾಗ ಎಂದರೆ ನಾಲ್ಕನೇಯ ಮೂರು ಭಾಗ. ಅಂದರೆ 3/4 ಅಥವಾ 75% ಪಾಲು ಆಗುತ್ತದೆ.

ಕಾಲು, ಅರ್ಧ, ಮುಕ್ಕಾಲು


ಒಂದು ವಸ್ತುವನ್ನು 4 ಸಮನಾದ ಭಾಗ ಮಾಡಿ  ಅದರಲ್ಲಿ  ಒಂದು ಭಾಗ ಕಾಲು ಭಾಗ, ಎರಡು ಭಾಗ  ಅರ್ಧ ಭಾಗ,  ಮುರು ಭಾಗ ಮುಕ್ಕಾಲು ಭಾಗ ಹಾಗೂ ನಾಲ್ಕು ಭಾಗ  ಪೂರ್ಣ ಭಾಗ  ಆಗುತ್ತದೆ.

ಕಾಲು ಭಾಗ - 1/4

ಅರ್ಧ ಭಾಗ - 2/4 = 1/2

ಮುಕ್ಕಾಲು ಭಾಗ - 3/4

ಪೂರ್ಣ ಭಾಗ - 4/4 = 1

ಮೇಲೆ   ಒಂದು  ಆಯತಾಕಾರದ ಭಾಗ ಮಾಡುವದನ್ನು   ನೋಡಿದಿರಿ.  ಈಗ  ವೃತ್ತವನ್ನು ಅಂದರೆ ಸರ್ಕಲ್  ಭಾಗ ಮಾಡಿ  ನೋಡೋಣ.

ವೃತ್ತದ ಭಾಗ

ಉದಾಹರಣೆಗೆ ಅಮ್ಮ ದೋಸೆಗಳನ್ನು ಮನೆಯವರಿಗೆಲ್ಲ ಬಡಿಸುತ್ತಿದ್ದಾಳೆ. 

ಒಬ್ಬ ಕಾಲು, ಇನ್ನೊಬ್ಬ  ಅರ್ಧ, ಮತ್ತೊಬ್ಬ ಮುಕ್ಕಾಲು ಮತ್ತು ಪೂರ್ತಿ ದೋಸೆ ಕೇಳಿದರೆ  ಈ ಮೇಲಿರುವ ಹಾಗೆ ಭಾಗ ಮಾಡಿ ಕೊಡಬೇಕು. ಗುಲಾಬಿ ಬಣ್ಣ  ದೋಸೆ ಚೂರು ಎಂದು  ಭಾವಿಸಿ.

ಈಗ ಗೊತ್ತಾಯ್ತಲ್ಲ ಕಾಲು, ಅರ್ಧ, ಮುಕ್ಕಾಲು, ಪೂರ್ಣ ಭಾಗ ಎಂದರೆ?

 ಈ ಲೇಖನ ಜುಲೈ ೧೭ ೨೦೧೮ ರಲ್ಲಿ ಬಾಲವಿಸ್ಮಯ ಬ್ಲಾಗ್ ಅಲ್ಲೀ ರಾಜೇಶ ಹೆಗಡೆ ಅವರಿಂದ ಪ್ರಕಟ ಆಗಿತ್ತು.

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ